Friday, 31 March 2017

ಸಂಸಾರದ ಗುಟ್ಟು

ಕೈ ಹಿಡಿದು ನಡೆವಾಗ
ಕಳಚಿ ಹೋದೆ
ನಿನ್ನತ್ತ ಹೊರಳಿದಾಗೆಲ್ಲ
ಅತ್ತೆಲ್ಲೋ ಜಾರಿದೆ !

ಹಗುರ ಹಿಡಿದಿದ್ದರೂ
ಒಮ್ಮೆ ಹೊರಳಿದ್ದರೂ
ಸಾಕಿತ್ತೇನೋ ಅನಿಸಿತ್ತು
ಹಲವು ಬಾರಿ !

ಬದುಕು ಅರಳಲೂ
ಅದೇನೋ ಬೇಕಿತ್ತು
ಚಿಟಿಕೆ ಉಪ್ಪಿನಷ್ಟು
ನನಗೂ ನಿನಗೂ
ಗೊತ್ತಿದ್ದೂ ಗೊತ್ತಿಲ್ಲದಷ್ಟು !

ಇಲ್ಲಿಗೇ ಮುಗಿಸುವೆ
ಗೆಳತಿ ಈ ಪದ್ಯ
ಸಂಸಾರದ ಗುಟ್ಟು
ರಟ್ಟಾಗದಿರಲಿ ಸದ್ಯ ! 

Sunday, 26 March 2017

ಕೈ ತೊಳೆದ ಕೇಜರಿವಾಲ

ಹಸಿದ ಕೇಜರಿವಾಲ
ಅನ್ನಕ್ಕಾಗಿ ಅಣ್ಣನ
ಮೊರೆ ಹೋದ !
ಹಸಿದ ಮುಖಗಳ
ಪರಿಚಯಿಸಿ
ಅನುಕಂಪ ಗಿಟ್ಟಿಸಿದ !

ಅಷ್ಟೋ ಇಷ್ಟೋ
ಉಣ್ಣುತ್ತಿದ್ದ ಅಣ್ಣ
ಹಸಿದು ಕುಂತರು
ನಿದ್ದೆ ಬಿಟ್ಟರು
ಹಲವರ ಜೋಳಿಗೆ
ತುಂಬಲು !

ಬೇಳೆ ಸಿಕ್ಕುವ
ಸೂಚನೆ ಸಿಕ್ಕೊಡನೆ
ಕೇಜರಿವಾಲ
ಚೀಲಗಳ ದಾಸ್ತಾನು ಮಾಡಿದ
ಒಳಗೊಳಗೇ !

ಹೊಟ್ಟೆ ಹಸಿದು
 ಬೆಂಕಿ ಉರಿದು
 ಸುತ್ತಲವರ
 ಸುಡುತಿರುವಾಗ
ಅದರ ಕಾವಲೇ
ಬೇಳೆ ಬೇಯಿಸಿಕೊಂಡ !

ಬಸಿದ ನೀರಲಿ ಅಣ್ಣನ
ಹಸಿವೆ ಮುರಿದು ಅದರಲೆ
ಕೈ ತೊಳೆದು ಕೊಂಡ !

Thursday, 23 March 2017

ಚುಟುಕಾಗಿ ಕಥೆ
ಹೇಳುತಿದೆ ಕವಿತೆ
ಒಗಟಾಗಿ ವ್ಯಥೆ
ಹೇಳುತಿರೆ ಕಾವ್ಯ !

# ಬೇವು ಬೆಲ್ಲ #


ಬೇವ ಬೇಡುವುದಿಲ್ಲ ಯಾರೂ,
ಪುಕುಲರು.
ಕಲ್ಲು ಸಕ್ಕರೆ ಬೆಲ್ಲವೆ ಬೇಕು
ಇವರಿಗೆಲ್ಲ !

ಬೇವಿನ ಗುಣ ಗೊತ್ತಲ್ಲ ?
ಯಾರೂ ಮುತ್ತುವುದಿಲ್ಲ
ಮುತ್ತಿಕ್ಕುವುದೂ ಇಲ್ಲ
ಖಾಯಿಲೆಯ ಗೋಜಿಲ್ಲ ಅದಕೆ !

ಒಬ್ಬಂಟಿಯಾದರೂ ಬೇವು
ಆದಕ್ಕಿಲ್ಲ ಸಕ್ಕರೆಯ ನೋವು !

Friday, 10 March 2017

ಕನಸು ಕಾಣುವುದು !

ನಾನು ' ಮುತ್ತಿನ'
ಮಾತನಾಡಿದಾಗೆಲ್ಲಾ
ಅವಳ ಕೆನ್ನೆ ಕೆಂಪಾಗುವುದು !

ಮುತ್ತು ಕೊಟ್ಟುಬಿಟ್ಟರೆ
ಮತ್ತೇನಾಗುವುದೋ
ಎಂದು ನಾನು ಕನಸು
ಕಾಣುವುದು !

ಬದುಕು

ಬರೆಯಲಾಗದ ಸಾಲುಗಳ
ಬಳಕೆಯಾಗದ ಭಾವಗಳ
ಹೇಳಲಾಗದ ಮಾತುಗಳ
ಗುಚ್ಛ ಬದುಕು ! ನೀ ಅದರಲೆ
ಖುಷಿಯ ಹುಡುಕು !

Sunday, 5 March 2017

# ಪದ್ಯ ಮತ್ತು ಮೂಡು#


ಪೆನ್ನು ಹಾಳೆಯ ಹಿಡಿದು
ಕುಂತೆ ' ಮೂಡಿಗಾಗಿ ' ಕಾಯುತ್ತಾ
ಹಾಳಾದ್ದು ಬರಲೇ ಇಲ್ಲ !

ಥಟ್ಟನೆ ' ತೇಜಸ್ವಿ' ನೆನಪಾಯಿತು
ಬರೆಯಬೇಕೆಂದರೆ  'ಕುಂಡೆ' ಯೂರಿ
ತಲೆಬಗ್ಗಿಸಿ ಸುಮ್ಮನೆ ಬರಿ
ಎಂದಿದ್ದರು ಎಂದಿನಂತೆ !

ಹೋದೆ ಬರೆಯುತ್ತಾ, ಹರಿಯುತ್ತಾ,
 ಒಡೆಯುತ್ತಾ, ತಿದ್ದುತ್ತಾ ....
ಕಡೆಗೆ ಅಲ್ಲೆಲ್ಲೋ ಮೂಲೆಯಲ್ಲೊಂದು
ನವಿರಾದ ಸಾಲು ಹುಟ್ಟಿ , ಕೈ ಎಳೆಯಿತು
ಅದನ್ನೇ ಹಿಂಬಾಲಿಸಿದೆ
" ಪದ್ಯ ಸಿಕ್ಕಿತು ! "