Tuesday, 29 September 2015


ಧೂಮಕವನ 
ಸೇದುವವರು  
ಸೇದಿ ಸೇದಿ  ಹಾಳಾಗಿ !
ಸೇದದವರು 
' ಧೂಮಕವನಕ್ಕೆ '
ಮರುಳಾಗಿ !

ಓದಬಾರದು 
ಹೆಣ್ಣು ಮಕ್ಕಳನ್ನು ಗೋಳಾಡಿಸಬಾರದು 
ಕುಡಿದುವಾಹನ ಚಲಾಯಿಸಬಾರದು 
ಜನನಿಬಿಡೆಯಲ್ಲಿ ಸಿಗರೇಟು ಸೇದಬಾರದು 
ಈ ಮೇಲಿನ ಯಾವುದನ್ನೂ ಮಾಡದವರು 
ಈ ಕೆಳಗಿನ ಪದ್ಯಗಳನ್ನು ಓದಬಾರದು !

ವ್ಯವಸ್ಥೆ 

ನಾನು ವ್ಯವಸ್ಥೆಯನ್ನು ಸುಡಲಾಗದ 
ಅಸಹಾಯಕತೆಗೆ ಸಿಗರೇಟು ಸುಡುತ್ತೇನೆ 
ಮತ್ತು ನಾನೂ (ಆ) ವ್ಯವಸ್ಥೆಯಾಗುತ್ತೇನೆ !

ಕೆಲವರು 

ಕೆಲವರು 
ಒಳಗೊಳಗೆ ಸುಡುವುದಕ್ಕೆ 
ಯಾರಿಗೂ ಹೇಳಲಾಗದಕ್ಕೆ 
ಏನೂ ಮಾಡಲಾಗದಕ್ಕೆ 
ಸಿಗರೇಟು ಸೇದುತ್ತಾರೆ !
ಮತ್ತೆ 
ಕೆಲವರು ಹೋಮ 
ಮಾಡುತ್ತಾರೆ !!!

ಕೆಂಡ  ಮತ್ತು ಹೊಗೆ 

ಸಿಗರೇಟನ್ನು ಬೈಯ್ಯುತ್ತಲೇ 
ಹೊತ್ತಿಸಿಕೊಂಡ ಗೆಳೆಯ 
ಹಲವರಲ್ಲಿ ಆಲೋಚನೆಯ 
ಕಿಡಿಹೊತ್ತಿಸುತ್ತಿದ್ದ !
ಆದರೆ 
ಆಲೋಚನೆಕಿಡಿ 
ಉರಿವಬೆಂಕಿಯಾಗದೆ 
ಕೆಂಡವಾಗಿ ಹೊಗೆ ಮಾತ್ರ 
ಆಡುತ್ತಿತ್ತು !!!

ದರ್ಶನ 

ದರ್ಶನ ವಿಧಿಸಿದ ಎಚ್ಚರಿಕೆ 
"ಧೂಮಕವನ  ಆರೋಗ್ಯಕ್ಕೆ ಹಾನಿಕಾರಕ" !
ಆದರೆ ಇದರಿಂದ ಸಾವು ನೋವು 
ಖಂಡಿತ ಸಂಭವಿಸುವುದಿಲ್ಲ !!!

ಧೂಮಪಾನ 

ಸೇದದವರು ಬಿಟ್ಟುಬಿಡಿ ಎನ್ನುವುದು 
ಅಸೂಯೆಯಿಂದ !
ಸೇದಿ ಬಿಟ್ಟವರು ಬಿಡಿಸಲುಯತ್ನಿಸುವುದು 
ಮತ್ಸರದಿಂದ !!!

ಗೀಟು 

ಧೂಮಪಾನ ಘಾಟು 
ಅದಕ್ಕೇ ಎಳೆವುದು
'ದ' ಕ್ಕೆ  ಗೀಟು !

ಭೈರಾಗಿ 

ಭೈರಾಗಿಗಳು ಭಂಗಿ ಹೊಡೆದು 
ಶಿವನ ಕಾಣುವರು !
ನಮ್ಮ ನಿಮ್ಮಂಥವರು ತೆಗಳಿ 
ಮತ್ತೊಂದನು ಹಚ್ಚುವೆವು !!!

ಘಾಟು 

ಭಾರೀ ಘಾಟು ಸಿಗರೇಟು 
ಅದಕೆಂದೇ ನಾ ಹೊಗೆಯನು 
ಹೊರಬಿಡುವುದು !

ಸುತ್ತಮುತ್ತಲಿನ ಪುಕ್ಕಟ್ಟೆಯವರು 
ಸುಮ್ಮನೆ ಹಾಗೂ ಹೀಗೂ 
ಕೆಮ್ಮುವರು !

ಪಟಾಕಿ ಹೊಡೆದರೂ 
ಸಿಗರೇಟು ಹೊಡೆದರೂ 
ದುಡ್ಡು ಸುಡುತ್ತೀಯ
ಎನ್ನುವರು !

ತಾವೂ ಏಕಾಂತದಲಿ 
ಬೆರಳುಗಳಲಿ ಸಿಗರೇಟನಿಟ್ಟ 
ಪೋಸು ಕೊಟ್ಟು ಕೊಳ್ಳುವರು !
ಮತ್ತು 
ಈ ಪದ್ಯ ಓದಿದಾಗಲೆಲ್ಲ 
ಮನಸಲ್ಲೇ ಕಡ್ಡಿಗೀರಿ 
ಹೊಗೆಯಲ್ಲಿ ಸಿಕ್ಕು  
ಖೆಮ್ಮುವರು !!!













Saturday, 12 September 2015

ಸಿಗರೇಟು

ವರ್ತುಲ ವರ್ತುಲ ಸಿಗರೇಟಿನ ಹೊಗೆಯೆ೦ದು
ಅಡಿಗರು ಬರೆದಾಗ ಕುವೆ೦ಪು ಕೆ೦ಡಾಮ೦ಡಲ !

ಸಿಗರೇಟಿನ ಮ೦ದಬೆಳಕಿನಲ್ಲಿಯೇ ಅದೂ
ಮೈಸೂರಿನ ಮ೦ದಣ್ಣನ ಕಾಫಿ ಹೌಸಿನಲ್ಲೇ
ಈ ಕವನ ಹುಟ್ಟಿರಬಹುದಾ ???

ಮ೦ದಬೆಳಕಿನ, ಘಾಟಿನ, ಎನೂ ಸ್ಪಷ್ಟವಾಗಿ
ಕಾಣದ ಸ್ಥಿತಿ ಯಲ್ಲಿ  ನವ್ಯಕಾವ್ಯಗಳು ಹುಟ್ಟಿ
ಅವು ಒದುಗರಿಗೂ ಅರ್ಥವಾಗದೆ
ಕಾಡಿರಬಹುದಾ ???

ಸಿಗರೇಟಿನ ಹೊಗೆ ಕೋಣೆಯನ್ನೆಲ್ಲ
ಆವರಿಸಿ ಮಾಯಾಲೋಕ ಸೃಷ್ಠಿಸಿ
ತೇಜಸ್ವಿಯವರ ಕರ್ವಲ್ಹೊ ಕಾದ೦ಬರಿಯ
ಮ೦ದಣ್ಣ ಹುಟ್ಟಿರಬಹುದಾ ???

ಈಗಬಿಡಿ ಸಿಗರೇಟು ಹಾನಿಕಾರಕ
ನವ್ಯಕಾವ್ಯ ಇನ್ನೂಹಾನಿಕಾರಕ !
ಸಿಗರೇಟಿನ ಆ೦ಗಡಿಯಲ್ಲೇ ಸಿಗುವ
"ನಿಕೋರೆಟ್ಟು" !
ಒ೦ದು ಹಿಡಿಸಲು ಒ೦ದು ಬಿಡಿಸಲು
ಎರಡೂ ಅ೦ಗಡಿಯವಗೆ ಬಿಜಿನೆಸ್ಸು !

ಒ೦ದು ಧ್ಯಾನ ಹೇಳಿಕೊಟ್ಟರೆ
ಮತ್ತೊ೦ದು ಕಣ್ನು ತೆರೆಸುವುದು
ಒ೦ದು ಕುವೆ೦ಪುವಾದರೆ
ಮತ್ತೊ೦ದು ಅಡಿಗರ೦ತೆ!

ದರ್ಶನ್ ಜೆ