Sunday, 10 September 2017

ಧೈರ್ಯ ತಂದುಕೋ !

ನಾನು ಬೀದಿ ಬದಿಯಲ್ಲಿ
ನಿಂತ ಕನ್ನಡಿ
ಹಾದುಹೋಗುವುದನ್ನು
ಪ್ರತಿಫಲಿಸುವುದಷ್ಟೇ ಕೆಲಸ

ದನ ನನ್ನ ಬಳಿ ಬಂದು ಮೈಉಜ್ಜಿದೆ
ನಾಯಿ ಕಾಲೆತ್ತಿ ಉಚ್ಚೆ ಹೊಯ್ದಿದೆ
ಮೋಟಾರು ಕಪ್ಪನೆಯ ಹೊಗೆ ಉಗುಳಿ
ಕೊಚ್ಚೆ ಸಿಡಿಸಿದೆ.......

ಇದೆಲ್ಲಾ ಅವಿರತ ನೆಡೆದು
ನನ್ನ ಮೇಲೂ ಗೀರು ಗಾರು
ಕಲೆ ನೂರಾರು
ಅದೇಕೋ ನೀನು ಮಾತ್ರ ಎಲ್ಲ
ಓರೆ ಕೋರೆಗೂ ನನ್ನನ್ನಷ್ಟೇ ದೂಷಿಸಿದೆ

ನೀನಿದ್ದದ್ದೇ ಕಪ್ಪು ವಿಕಾರ
ನಾನೇನು ಮಾಡಲಿ ?
ಅದೇ ಕಂಡಿತು ನನ್ನಲ್ಲಿ
ಹಿಡಿಸದೆ ನನ್ನನ್ನೇ
"ಧ್ವ೦ಸ " ಗೊಳಿಸಿದೆ ನೀನು
ಕೆಳಗೆ ಬಿದ್ದ ನಾನು ಸಹಸ್ರ ಚೂರು !

ಒಂದೊಂದು ಚೂರಿನಲ್ಲೂ
ನಿನ್ನ ವಿಕೃತಿ ಪ್ರತಿಫಲಿಸತೊಡಗಿದೆ
ಭಯವಾಗಿತ್ತಿದೆಯಾ  ?
ಕನ್ನಡಿಯಲ್ಲಿನ ಪ್ರತಿಫಲನ
ಜಗದ ನಿಯಮ ಸ್ವಲ್ಪ
ಧೈರ್ಯ ತಂದುಕೋ !

ದರ್ಶನ್ ಜೆ









Thursday, 31 August 2017

ಮೊದಲ ಹೆಜ್ಜೆ !

ಹಣತೆ ಹಚ್ಚುವುದು
ಸೂರ್ಯನಾಗುವ ಬಯಕೆಯ
ಮೊದಲ ದಿಟ್ಟ ಹೆಜ್ಜೆ !

ಮಾತ್ರೆಗಳು !

ಅಯತಪ್ಪಿ ಬಿದ್ದು
ಸಾಯುವವನನ್ನು
ಮೆಲ್ಲಗೆ ಒರಗಿಸಿ ಮಲಗಿಸಿ
ಉಸಿರು ನಿಲ್ಲಿಸುವ 
ಸಾಧನಗಳೇ ಮಾತ್ರೆಗಳು !


ರಾಜನಲ್ಲ !

ಪ್ರಶ್ನೆ ಕೇಳದವನು
ಒಳ್ಳೆಯ ಪ್ರಜೆಯಲ್ಲ
ಉತ್ತರ ಹೇಳದವನು
ಒಳ್ಳೆಯ ರಾಜನಲ್ಲ !

Wednesday, 16 August 2017

ತತ್ವ

ಬದುಕು ನೀರಿನ೦ತೆ
ಬದುಕಿರುವವನ ಮುಳುಗಿಸುತ್ತದೆ
ಸತ್ತವನ ತೇಲಿಸುತ್ತದೆ !

ಮಳೆಯ ವಾಸನೆ

ಮಳೆಯ ವಾಸನೆಗೆ ಬಾಲ್ಯದ ನೆನೆಪು
ಮ೦ಜು ಬೀಳುತಿರೆ ಹಸಿರಿಗೆ ಒನಪು
ಬಿಸಿಲೋ ತಿ೦ಗಳೊ ಎರಡೂ ಬೆಳಕು
ಬೀಸುವ ಗಾಳಿಗೆ ತರಗೆಲೆ ಬದುಕು !

Sunday, 9 July 2017

ಬುದ್ಧಿವಂತ

ಮರದ ಕೊಂಬೆಯ
ಮೇಲೆ ನಿಂತು
ಮರಕಡಿವ ಮನುಷ್ಯ
ಎಲ್ಲ ಜೀವಿಗಳಿಗಿಂತ
ಬುದ್ಧಿವಂತ !

Friday, 12 May 2017

ರತ್ನ ಅಲ್ಲ


ಕುಡ್ದಾಗ್ ನಂಗೆ ಏನ್ಮಾಡ್ ತೀರಿ
ನಾಲ್ಗೆ ಒಳ್ಳಾಕಿಲ್ಲ
ಕನ್ನಡ್ ಪದಗಳ್ ನಂಗೂಪ್ರಾಣ
ನಾ ರತ್ನ ಅಲ್ಲ !

ತಪ್ ತಪ್ ಕನ್ನಡ ಮಾತಾಡೋದ್
ಯಾಕ್ ಕಾಟಾಚಾರ ?
ಬಾಯಿಗ್ ಬಂದಂಗ್
ಆಡ್ಬುಟ್ರೆ ಅಮ್ಮುಂಗ್
ಅಪ್ ಚಾರ !

ಕುಡ್ಕ ಅಂತ ನರ್ಕಕ್ ಇಳ್ಸಿ
ಬಾಯ್ ಹೊಲ್ಸಾಕಿದ್ರೂನೆ
ಮೂಗಲ್ ತೀರ್ಥ ಬುಟ್ಕನ್ತೀನಿ
ನನ್ ಮನ್ಸನ್ ನೀ ಕಾಣೆ !
ಮನ್ಸಲ್ ಕನ್ನಡ ಮೆಟ್ಕೊಂದೈತೆ
ಕನ್ನಡಮ್ನಾಣಿ !

ಹಣ್ಣಾದ ಮುದುಕ


ಬರಡಾಗಿದ್ದ  ಭೂಮೀಲಿ
ಸಸಿಗಳ ನೆಟ್ಟ
ನೀರ ತಂದು ಹಾಯಿಸಿ
ಮರಗಳ ಕನಸ ಕಂಡ !

ನಕ್ಕರು ಹಲವರು
ತಿಕ್ಕಲೆಂದರು ಕೆಲವರು
ಇಲ್ಲದ ನೀರ
ತಂದು ಹಾಯಿಸಿ
ಮನೆಹಾಳು
ಮಾಡುತ್ತಿರುವನೆಂದರು
ಬಹಳರು !
ಆದರೂ ಅವನು
ಮರಗಳ ಕನಸ ಬಿಡಲಿಲ್ಲ .

ವರ್ಷಗಳು ಉರುಳಲು
ಮರಗಳು ಕಾಡಾದವು
ಬರಡು ಭೂಮಿಯಲ್ಲಿ
ನೀರು ನಿಂತಿತು
ಹಕ್ಕಿಗಳು ಬಂದವು
ಭಾವಿ ತುಂಬಿದವು
ಗಾಳಿ ತಂಪಾಯ್ತು....

ಈಗ ಜನ ಹಾಯಾಗಿದ್ದಾರೆ
ಎಲ್ಲವನು ಊರ ದೇವರಿಗೆ
ಆರೋಪಿಸಿ , ದೇವಳದ ಮೇಲೆ
ಗೋಪುರವ ಕಟ್ಟಿಸಿ !

ಸಸಿ ನೆಟ್ಟವನು ಈಗ
ಮುದುಕನಾಗಿದ್ದಾನೆ
ಬೆಟ್ಟದ ತಡಿಯ
ಗುಡಿಸಲಲ್ಲಿ ಸದಾ
ಮಲಗಿರುತ್ತಾನೆ !
ನಿದ್ದೆಯಲ್ಲೂ ಮರಳುಗಾಡ
ಕನವರಿಸುತ್ತಿರುತ್ತಾನೆ !

Sunday, 7 May 2017

' ದಾರ '

ಸಣ್ಣ ಕಥೆಗಳು
ಬರಹಗಾರನ
ಆತ್ಮಕಥೆಯ
ತುಕಡಿಗಳು !

ಬಾವಿ ನೀರು
ಅವನದ್ದು
ಬಿಂದಿಗೆ ಶ್ರಮ
ನಮ್ಮದು

' ದಾರ '
ಕಥೆ ಪುಸ್ತಕ !

Friday, 28 April 2017

http://epaper.vishwavani.news/bng/tshare/bng/23-04-2017/17/Vishwavani-ALL-23042017-1723042017102309.gif
ಗಡ್ಡಕ್ಕೆ ಚೆಡ್ಡಿಗೆ
ಬೆಂಕಿ ಬಿದ್ದಿದೆ
ಮರೆಗುಳಿ ಕನ್ನಡಿಗ
ಎದ್ದಂತಿದೆ !
ಕನ್ನಡಾಭಿಮಾನ
ಮುಗಿಲು ಮುಟ್ಟಲಿದೆ !
ಜನ
ಸ್ವಲ್ಪ ಹರಿದ
ಚಪ್ಪಲಿಯ
ಹೊಲಿಸದಷ್ಟು
ಶ್ರೀಮಂತರಾಗಿ ಬಿಟ್ಟರೆ
ಕಸುಬಿನವ
ಏನು ಮಾಡಬೇಕು ?

Saturday, 22 April 2017

ಏನೆನ್ನಬೇಕು ?

ಗಿಣಿಯನು
ಪಂಜರದೊಳಿಟ್ಟು
ಅನ್ನ ನೀರು
ಕೊಟ್ಟು ಬಿಟ್ಟು
ಧನ್ಯತೆಯ ಅನುಭವಿಸುವವರನು
ಏನೆನ್ನಬೇಕು ?

ಕಣ್ಣುಗಳಿಗೆ
ಬಟ್ಟೆ ಕಟ್ಟಿ
ಕತ್ತಲಲ್ಲಿ
ಓಡ ಬಿಟ್ಟು
ಕೆಟ್ಟ ಸುಖವ
ಸುಖಿಸೊ ಮನವ
ಏನೆನ್ನಬೇಕು ?

ಬೆಳ್ಳಂಬೆಳ್ಗೆ
ವೇಷ ತೊಟ್ಟು
ಒಳಿತು ಕೆಡುಕು
ಗ್ರಹಕೆ ಕೊಟ್ಟು
ಕಾಸು ಮಾಡುವವರ
ಏನೆನ್ನಬೇಕು ?

ಎಲ್ಲದನ್ನೂ
ಕೂಡಿ ಕಳೆದು
ತಾನು ತಿನ್ನಲಷ್ಟೆ ದುಡಿದು
ಮರುಗಲೊಲ್ಲ
ಕೊರಡು ಮನವ
ಏನೆನ್ನಬೇಕು ?

ಕೇಳಿದರೂ ಕೇಳದಂತೆ
ಕಾಣಿಸಿದ್ದೂ ಕಾಣದಂತೆ
ಎದಿರು ಗೊಂಡಾಗ
ಹುಸಿನಗುವ
ವಿದೂಷಕರನು
ಏನೆನ್ನಬೇಕು ?













Friday, 21 April 2017

ಬಿಸಿಲಿಗೆ ತಂಪನೆರೆವ
ಅವಳ ಪ್ರೀತಿ
ಅರೆಕಾಸಿನ ಮಜ್ಜಿಗೆಯ
ಕುಡಿದಂತೆ !

ಅಸಹಾಯಕ ಕವಿ

ಯಾರ ಸಹಾಯವೂ
ಇಲ್ಲದೆಯೇ
ಬದುಕು ಕಟ್ಟಿಕೊಳ್ಳುವ
ಸ್ವಾಭಿಮಾನಿ ಕವಿ,
ಅಸಹಾಯಕ
ಕವನಗಳ ಬರೆದಾಗ
ಸಹೃದಯರ ಸಹಾನುಭೂತಿಗೂ
ಸಂಗಾತಿಯ ಕೆಂಗಣ್ಣಿಗೂ
ಒಮ್ಮೆಗೇ ಗುರಿಯಾಗುತ್ತಾನೆ 😊

Thursday, 20 April 2017

ಅರ್ಥವಿರದ ಕವಿತೆ


ಹಿತ್ತಲಗಿಡ
ಮದ್ದಲ್ಲ
ಪ್ರೊಫೆಸರ್ ಮಕ್ಳು
 ಒದಲ್ಲ !

ಬುದ್ಧಿವಂತರು ಬಾಯಿ
ಬಿಡಲ್ಲ
ದಡ್ದನನ್ನ ಮಕ್ಳು
ಮುಚ್ಚಲ್ಲ !

ಕಮ್ಯುನಿಸ್ಟರು
ಅಳಲ್ಲ
ಕಾರ್ಟೂನಿಷ್ಠರು
ನಗಲ್ಲ !

ಕಾವ್ಯ ಮತ್ತು ಖಡ್ಗ !

ಕಾವ್ಯ ಸೃಷ್ಠಿಯ ಸುಗ್ಗಿ
ಭಾವನೆಗಳ ಸ್ಪುರಣ
ಎಂಬ ಕಾಲವೊಂದಿತ್ತು
ನಂತರ , ಕಾವ್ಯ ಬುದ್ದಿಯ
ವ್ಯಾಕರಣವಾಯ್ತು
ಕಾವ್ಯ ಖಡ್ಗವಾಗಬೇಕು
ಎಂಬ ಮತ್ತೊಂದು ಕಾಲವಿತ್ತು

ಈಗಂತೂ ಕಾವ್ಯ ಚೆನ್ನಾಗಿರಬೇಕು
ಇಲ್ಲ software ಇಂಜಿನಿಯರ್
ಆಗಿರಬೇಕು ಅಂತಾರೆ ನೋಡಿ 😊

ಬಾರಿನ ದೀಪ ಮಂಕು !

ಕುಡುಕನಿಗೇಕೆ
ಲೋಕದ ಕೊಳಕು
ಹೊತ್ತಿರುವಾಗ
ಒಳಗಣ ಬೆಳಕು !

ಅದಕೆ ಏನೋ
ಬಾರಿನ ದೀಪ
ಸದಾ ಮಂಕು !


ಅಸಹಾಯಕ

ಬಿಸಿಲು ಬೆಳಕಿರದಿದ್ದರೆ
ನಿನ್ನ ನೆರಳೂ ನಿನ್ನ
ಹಿಂಬಾಲಿಸುವುದಿಲ್ಲ
ಹೀಗೆ
ಅಸಹಾಯಕ ಕವನಗಳ
ಬರೆವುದರಿಂದ ನನ್ನ
ಪಾರುಮಾಡುವವರಿಲ್ಲ !

ಇನ್ನೊಂದು ಡ್ರಿಂಕು

ಕುಣಿಯಲಾರದವಳಿಗೆ
ನೆಲ ಡೊಂಕು
ನೆಡೆಯೆಲಾರದವನಿಗೆ
ಇನ್ನೊಂದು ಡ್ರಿಂಕು !

Saturday, 15 April 2017

ಅರ್ಧ ಸಮಸ್ಯೆ

ವಿಶ್ವದ
ಅರ್ಧ ಸಮಸ್ಯೆ
ಹಸಿದ ಹೂಟ್ಟೆಯದ್ದು.
ಇನ್ನರ್ಧ
ಉಂಡೂ
ಜೀರ್ಣವಾಗದೆ
ಉಳಿದದ್ದರದ್ದು !

ತೀರದ ತಾಕಲಾಟ

ಸಮುದ್ರದ
ಅಲೆಗಳ ಏರಿಳಿತ
ತೀರದ ತಾಕಲಾಟವಷ್ಟೆ
ಒಮ್ಮೆ ಒಳನುಗ್ಗಿ
ಪಾರಾಗಿಬಿಟ್ಟರೆ
ಕಣ್ಣು ಕೊರೈಸುವಷ್ಟೂ
ಸಾಗರ !
ಮನುಷ್ಯ ಜೀವನವೂ ಹಾಗೆಯೇ !

solve ಎಂಟು !

ಸೈಂಟಿಸ್ಟ್ ಗಳು ಹೇಳುವರು
"ನೀರು ಯುನಿವರ್ಸಲ್" ಸಾಲ್ವೆಂಟು
ಕಾರಣ ಅದು
ಹಲವಾರು ವಸ್ತುಗಳನ್ನು
ಕರಗಿಸುವುದುಂಟು...

ಕುಡುಕನಿಗೆ ಆಲ್ಕೋಹಾಲೇ
"ಅಪರಿಮಿತ ಸಾಲ್ವೆಂಟು" ಏಕೆಂದರೆ ಅವನ ಎಲ್ಲ ನೋವುಗಳನ್ನು ಕರಗಿಸಬಲ್ಲ
ಏಕೈಕ ಶಕ್ತಿ
ಅದಕ್ಕೆ ಮಾತ್ರವೇ ಉಂಟು !

ಕನಸುಗಳು

ನನ್ನ ಕನಸುಗಳ ಕದಿಯಬೇಡ
ಆದರಿಂದ ನಿನಗೇ ನಷ್ಟ.
ಅವುಗಳು ಸಾಕಾರಗೊಳ್ಳುವವರೆಗೂ
ನಿನಗೇ ಅಂಟಿಕೊಳ್ಳೋ ಪ್ರಸವದ ಕಷ್ಟ !

ಅಂಬೇಡ್ಕರರು

ಆಗರ್ಭ ಶ್ರೀಮಂತಿಕೆಯಿದ್ದರೂ
ಎಲ್ಲವನು ಧಿಕ್ಕರಿಸಿ
ತುಂಡುಬಟ್ಟೆಯುಟ್ಟು
ನಾನೂ
ನಿಮ್ಮಂತಾಗಬಲ್ಲೆನೆಂದು
ಸಾರಿದವರು  ಗಾಂಧಿ !

ಬಡತನದಿಂದೆದ್ದು ಬಂದರೂ
ಪಾಂಡಿತ್ಯ ಪಡೆದು
ಸೂಟು ಬೂಟು ತೊಟ್ಟು
ಹಠ ಚಲವಿದ್ದರೆ
ನೀವು ನನ್ನoತಾಗಬಹುದೆಂದು
ವಿಶ್ವಾಸದ ಕಿಚ್ಚುಹೊತ್ತಿಸಿದವರು
ಅಂಬೇಡ್ಕರರು !



Monday, 10 April 2017

ಸಮುದ್ರ ಮಂಥನ

ದೇವ ದಾನವರ ನಡುವೆ
ನಡೆಯಿತು ಸಮುದ್ರ ಮಂಥನ
ಅಮೃತ, ವಿಷ, ಐಶ್ವರ್ಯ
ಏನೇನೋ ಹುಟ್ಟಿದರೂ
ಅದ್ಯಾಕೋ ನೋಡಿ
' ಕವಿತೆ ' ಮಾತ್ರ ಹುಟ್ಟಲೇ ಇಲ್ಲ !

ಹಾಗೇ ಯೋಚಿಸುತ್ತಿದ್ದಾಗ
ಅನ್ನಿಸಿದ್ದು ಇಷ್ಟು.
ಬುದ್ದಿ ಭಾವಗಳ ತಿಕ್ಕಾಟ
ಹುಲುಮಾನವನ ' ಆಸ್ತಿ '
ದೇವ ದಾನವರಿಂದ
ಅದನು ಬಯಸುತಿರುವುದು
ಆಯಿತೇನೋ ಸ್ವಲ್ಪ ಜಾಸ್ತಿ !

Sunday, 9 April 2017

ಪದ್ಯವಾಗಿ !

ಪದಗಳು ಹಗುರಾಗಿ
ಮದ್ಯ ಕುಡಿದು
ತಮ್ಮ ತಮ್ಮ ಜೀವನವನ್ನು
Contemplate
ಮಾಡಿಕೊಳ್ಳುತ್ತಿರುವಾಗ
ತಮಗೇ ಗೊತ್ತಿಲ್ಲದೇ
ಪಾಪ ' ಪದ್ಯಗಳಾದವು' !

ರೈತ

ಸತ್ತ ದೇಹ
ತಣ್ಣಗಾಗುವುದಂತೆ
ಅದಕ್ಕೆ ಆತ
ಕುಣಿಕೆಯ
ಹುಡುಕುವುದು.

ಒಳಗಣ ಉರಿಯ
ಹೊರಗಣ ಜಗತ್ತು
ಆರಿಸದಿದ್ದರೇನಂತೆ
ಅವನಿಗೆ ಮಾರ್ಗವು
ತಿಳಿದಿಹುದು !

Friday, 31 March 2017

ಸಂಸಾರದ ಗುಟ್ಟು

ಕೈ ಹಿಡಿದು ನಡೆವಾಗ
ಕಳಚಿ ಹೋದೆ
ನಿನ್ನತ್ತ ಹೊರಳಿದಾಗೆಲ್ಲ
ಅತ್ತೆಲ್ಲೋ ಜಾರಿದೆ !

ಹಗುರ ಹಿಡಿದಿದ್ದರೂ
ಒಮ್ಮೆ ಹೊರಳಿದ್ದರೂ
ಸಾಕಿತ್ತೇನೋ ಅನಿಸಿತ್ತು
ಹಲವು ಬಾರಿ !

ಬದುಕು ಅರಳಲೂ
ಅದೇನೋ ಬೇಕಿತ್ತು
ಚಿಟಿಕೆ ಉಪ್ಪಿನಷ್ಟು
ನನಗೂ ನಿನಗೂ
ಗೊತ್ತಿದ್ದೂ ಗೊತ್ತಿಲ್ಲದಷ್ಟು !

ಇಲ್ಲಿಗೇ ಮುಗಿಸುವೆ
ಗೆಳತಿ ಈ ಪದ್ಯ
ಸಂಸಾರದ ಗುಟ್ಟು
ರಟ್ಟಾಗದಿರಲಿ ಸದ್ಯ ! 

Sunday, 26 March 2017

ಕೈ ತೊಳೆದ ಕೇಜರಿವಾಲ

ಹಸಿದ ಕೇಜರಿವಾಲ
ಅನ್ನಕ್ಕಾಗಿ ಅಣ್ಣನ
ಮೊರೆ ಹೋದ !
ಹಸಿದ ಮುಖಗಳ
ಪರಿಚಯಿಸಿ
ಅನುಕಂಪ ಗಿಟ್ಟಿಸಿದ !

ಅಷ್ಟೋ ಇಷ್ಟೋ
ಉಣ್ಣುತ್ತಿದ್ದ ಅಣ್ಣ
ಹಸಿದು ಕುಂತರು
ನಿದ್ದೆ ಬಿಟ್ಟರು
ಹಲವರ ಜೋಳಿಗೆ
ತುಂಬಲು !

ಬೇಳೆ ಸಿಕ್ಕುವ
ಸೂಚನೆ ಸಿಕ್ಕೊಡನೆ
ಕೇಜರಿವಾಲ
ಚೀಲಗಳ ದಾಸ್ತಾನು ಮಾಡಿದ
ಒಳಗೊಳಗೇ !

ಹೊಟ್ಟೆ ಹಸಿದು
 ಬೆಂಕಿ ಉರಿದು
 ಸುತ್ತಲವರ
 ಸುಡುತಿರುವಾಗ
ಅದರ ಕಾವಲೇ
ಬೇಳೆ ಬೇಯಿಸಿಕೊಂಡ !

ಬಸಿದ ನೀರಲಿ ಅಣ್ಣನ
ಹಸಿವೆ ಮುರಿದು ಅದರಲೆ
ಕೈ ತೊಳೆದು ಕೊಂಡ !

Thursday, 23 March 2017

ಚುಟುಕಾಗಿ ಕಥೆ
ಹೇಳುತಿದೆ ಕವಿತೆ
ಒಗಟಾಗಿ ವ್ಯಥೆ
ಹೇಳುತಿರೆ ಕಾವ್ಯ !

# ಬೇವು ಬೆಲ್ಲ #


ಬೇವ ಬೇಡುವುದಿಲ್ಲ ಯಾರೂ,
ಪುಕುಲರು.
ಕಲ್ಲು ಸಕ್ಕರೆ ಬೆಲ್ಲವೆ ಬೇಕು
ಇವರಿಗೆಲ್ಲ !

ಬೇವಿನ ಗುಣ ಗೊತ್ತಲ್ಲ ?
ಯಾರೂ ಮುತ್ತುವುದಿಲ್ಲ
ಮುತ್ತಿಕ್ಕುವುದೂ ಇಲ್ಲ
ಖಾಯಿಲೆಯ ಗೋಜಿಲ್ಲ ಅದಕೆ !

ಒಬ್ಬಂಟಿಯಾದರೂ ಬೇವು
ಆದಕ್ಕಿಲ್ಲ ಸಕ್ಕರೆಯ ನೋವು !

Friday, 10 March 2017

ಕನಸು ಕಾಣುವುದು !

ನಾನು ' ಮುತ್ತಿನ'
ಮಾತನಾಡಿದಾಗೆಲ್ಲಾ
ಅವಳ ಕೆನ್ನೆ ಕೆಂಪಾಗುವುದು !

ಮುತ್ತು ಕೊಟ್ಟುಬಿಟ್ಟರೆ
ಮತ್ತೇನಾಗುವುದೋ
ಎಂದು ನಾನು ಕನಸು
ಕಾಣುವುದು !

ಬದುಕು

ಬರೆಯಲಾಗದ ಸಾಲುಗಳ
ಬಳಕೆಯಾಗದ ಭಾವಗಳ
ಹೇಳಲಾಗದ ಮಾತುಗಳ
ಗುಚ್ಛ ಬದುಕು ! ನೀ ಅದರಲೆ
ಖುಷಿಯ ಹುಡುಕು !

Sunday, 5 March 2017

# ಪದ್ಯ ಮತ್ತು ಮೂಡು#


ಪೆನ್ನು ಹಾಳೆಯ ಹಿಡಿದು
ಕುಂತೆ ' ಮೂಡಿಗಾಗಿ ' ಕಾಯುತ್ತಾ
ಹಾಳಾದ್ದು ಬರಲೇ ಇಲ್ಲ !

ಥಟ್ಟನೆ ' ತೇಜಸ್ವಿ' ನೆನಪಾಯಿತು
ಬರೆಯಬೇಕೆಂದರೆ  'ಕುಂಡೆ' ಯೂರಿ
ತಲೆಬಗ್ಗಿಸಿ ಸುಮ್ಮನೆ ಬರಿ
ಎಂದಿದ್ದರು ಎಂದಿನಂತೆ !

ಹೋದೆ ಬರೆಯುತ್ತಾ, ಹರಿಯುತ್ತಾ,
 ಒಡೆಯುತ್ತಾ, ತಿದ್ದುತ್ತಾ ....
ಕಡೆಗೆ ಅಲ್ಲೆಲ್ಲೋ ಮೂಲೆಯಲ್ಲೊಂದು
ನವಿರಾದ ಸಾಲು ಹುಟ್ಟಿ , ಕೈ ಎಳೆಯಿತು
ಅದನ್ನೇ ಹಿಂಬಾಲಿಸಿದೆ
" ಪದ್ಯ ಸಿಕ್ಕಿತು ! "

Tuesday, 28 February 2017

ನಾಯಿ ಮುಟ್ಟದ ರೊಟ್ಟಿ

ತಿಂಡಿ ಬೇಡಿದೆ ಹಸಿದು
ಅವರು ಕಣ್ಣೆತ್ತಿಯೂ
ನೋಡಲಿಲ್ಲ

ರಾತ್ರಿ ಉಳಿದದ್ದ ಎಸೆದು
ಹೇಳಿದ್ದು ಈಗಲೂ ನೆನಪಿದೆ
ಬದುಕಿಕೊ ತಿಂದು !

ಅದೇನು ತಡೆಯಿತೋ
ಹಸಿವಿನ ನಡುವೆಯೂ
ಒಲ್ಲೆ ಎಂದೆ !

ಎಸೆದ ರೊಟ್ಟಿಯ ಮೇಲೆ
ಮಣ್ಣ ತೂರಿ ಸಾಯಿ
ಬಾಂಚದ್ ಎಂದುಬಿಟ್ಟರು!

ಬದುಕು
ನಾಯಿಮುಟ್ಟದ ರೊಟ್ಟಿ
ಅನ್ನಿಸಿದ್ದೇ ಆವಾಗ!


Monday, 27 February 2017

ನನ್ನವಳು

ಹಾಳು ಸುರಿದ
ಮನೆ ಮನವ
ಒಪ್ಪಮಾಡಿದವಳು !

ಕಂಡ ಕಂಡಲ್ಲೆಲ್ಲಾ
ಹುಚ್ಚೆದ್ದು ಓಡಿದ್ದ
ಕುದುರೆಯ ಲಗಾಮ
ಹಿಡಿದವಳು !

ನನಗಾಗಿ ನನ್ನೊಡನೆಯೇ
ಸದಾ ಸಿಡಿಮಿಡಿ
ಗೊಂಡವಳು !

ನನ್ನದನ್ನೆಲ್ಲಾ ತನ್ನ
ಗರ್ಭದಲ್ಲಿಯೆ
ಅಡಗಿಸಿಕೊಂಡವಳು !

ಕಡೆಗಣಿಸಿ ಕಲಿಸಿದವಳು
ಉಣಿಸಿ ರಮಿಸಿದವಳು
ನನ್ನವಳು !

ಕ್ರಾಂತಿ

ಮನಸ್ಸು ಉರಿವಾಗ
ಹುಟ್ಟಿದ ಕಿಡಿ
ಆರದೆ ಯಾರನೂ ಸುಡದೆ
' ಕಾವ ' ಹಸ್ತಾಂತರಿಸಿದರೆ
ಅದೇ ಕ್ರಾಂತಿ !

ಧ್ವನಿ ಮತ್ತು ಪ್ರಜ್ಞೆ

ಒಬ್ಬನದ್ದು ಎಂದಿಗೂ
ಧ್ವನಿಯಾಗುವುದಿಲ್ಲ
ಅದಕ್ಕೆ ಹಲವಾರು
ದನಿಗಳು ಕೂಡಬೇಕು

ಒಬ್ಬನ ಪ್ರಜ್ಞೆಯೇ
ಸಾಕ್ಷಿ ಪ್ರಜ್ಞೆಯಲ್ಲ
ಅಲ್ಲಿ ಬಿನ್ನ ವಿಚಾರಗಳ
ವೈರುಧ್ಯ ಇರಲೇಬೇಕು !

ಪ್ರೀತಿ

ಯಾವಾಗಲೂ ಹೀಗೆಯೇ
ನಾನೆಲ್ಲೋ ನೋಡುವಾಗ
ಅವಳು ನನ್ನ
ಅವಳೆಲ್ಲೋ ನೋಡುವಾಗ
ನಾನವಳ ನೋಡುತ್ತಾ
ಹೇಳಲಾಗದೆ ಪರಿತಪಿಸುವುದು
ಮತ್ತು ಹೀಗೆಯೇ ಕದ್ದುಮುಚ್ಚಿ
ಪ್ರೀತಿಯ ಅನುಭವಿಸುವುದು  !

ಶಿವರಾತ್ರಿ

ಶಬ್ಧ ಶಿವ
ಅರ್ಥ ಪಾರ್ವತಿ
ಶಬ್ಧಾರ್ಥ ಶಿವರಾತ್ರಿ !

Wednesday, 22 February 2017

ಕಾಡ ಮಕ್ಕಳು


ಗುಬ್ಬಿಗಳ ಒಕ್ಕಲೆಬ್ಬಿಸಿದರು
ಮರಗಳ ಕಡಿದು
ಅವು ಎಲ್ಲಿ ಹೋದವೋ
ಬದುಕ ಹುಡುಕಿ ?

ತಿಳಿ ನೀರಿಗೆ ಕೊಳಚೆಯ
ಬೆರೆಸಿ , ಕುಡಿವರು
ಅದನೇ ಮಗ್ಗಲಿನಿಂದ
ಬೋರುಗಳನಿಳಿಸಿ !

ಬದುಕುತಿಹರು
ತಾವೇ ನಿರ್ಮಿಸಿದ
ಹೊಗೆಯ ಜಗದೊಳು
ಕಂಡರೂ ಕಾಣದಂತೆ
ಮೀಸೆ ಮಣ್ಣಾಗದಂತೆ

ರಸ್ತೆಯಗಲಿಸಲಿಕ್ಕೆ
ಮರಕಡಿವವರು
ಕಟ್ಟಿಗೆಗೆ ಪುಳ್ಳೆ ಆಯುವವನ
ಕುಂಡೆಗೆ ಹೂಡೆವರು
ಇದಾವ ಸೀಮೆಯ ನ್ಯಾಯ ?

ಕೇಳಿ ತಮಾಷೆ
ಕಾಡತಬ್ಬಿದವರ
ಎಳೆದು ತರುತ್ತಾರಂತೆ
ಹೊಸ ಜಮೀನು
ಮನೆ ಕೊಡಿಸುತ್ತಾರಂತೆ
ಎಂಥ ಹತಾಷೆ !

ನಗುವಿಗೂ ನೆರಳಿಗೂ
ಬೆಲೆಕಟ್ಟುವವರು ಇವರು
ಇವರ ಜ್ಞಾನಕ್ಕೆ ತರ್ಕಕ್ಕೆ ತೆವಲಿಗೆ
ಬಲಿಯಾಗುತಿಹರು
" ಕಾಡ ಮಕ್ಕಳು "

Friday, 17 February 2017

ವಲಸಿಗನಾರು ???


ನೀನು ಈ ಊರಿಗೆ ಬ೦ದಾಗ
ನಿನ್ನನ್ನ 'ವಲಸಿಗ' ಅ೦ದರು
ನೀನು ಕೇಳಿ ಸುಮ್ಮನೆ ಮರುಗಿದ್ದೆ
ನಿನ್ನೂರ ನೆನೆದು ಕೊರಗಿದ್ದೆ !

ಕಾಲ ಉರುಳಲು ಬೇಗ
ಮೊನ್ನೆ ಬ೦ದವನನ್ನು ನೀನೂ
ಸ೦ಭೋದಿಸುವುದು ಹಾಗೆಯೇ
ಅಲ್ಲವೆ ಈಗ ?

ನಿನ್ನ ಮಗನೀಗ
ನಿನ್ನನ್ನು ಊರನ್ನು
ಎರಡನೂ ಬಿಡಲು
ತುದಿಗಾಲಲ್ಲಿ ನಿ೦ತಿರುವಾಗ
ಆ ಊರಲ್ಲಿ ಅವನನ್ನು
ಏನೆನ್ನುವರು ಹೇಳು ಬೇಗ ???
ಹಲವರು ತಮ್ಮ ಭುಜವನ್ನು
ತಾವೇ ತಟ್ಟಿಕೊಳ್ಳುತ್ತಾರೆ ತಪ್ಪಿಲ್ಲ
ಅದಕ್ಕೆ ನಾನು ನನ್ನ post ಅನ್ನು
ನಾನೇ Like ಮಾಡಿಕೊಳ್ಳುತ್ತೇನೆ 

ನಾ ಬರೆವುದು

ನಾ ಬರೆವುದು
ಅದಕ್ಕೂ
ಇದಕ್ಕೂ
ಮತ್ತೆದಕ್ಕೊ ಅಲ್ಲ
ಸುಮ್ಮನಿರಲಾರದ್ದಕ್ಕೆ
ಏನೂ
ಮಾಡಲಾರದ್ದಕ್ಕೆ !
ನನ್ಮ ಅವಳ
ಪ್ರೀತಿ ಅಲ್ಪಾಯು
ನೆನಪುಗಳೊ
ಪಾಪಿ ಚಿರಾಯು !

ಅಸ್ಥಿತ್ವ


ಎಲ್ಲದರ ಮೇಲೂ ಹೆಸರು
ಬರೆವ ಖಯಾಲಿ ನನಗೆ.
ಕಟ್ಟಿದ ಮನೆಯ ಮೇಲೆ....
ಕೊಂಡ ಕಾದಂಬರಿಯ ಮೇಲೆ...
ಕಡಲ ತಡಿಯ ಮರಳ ಮೇಲೆ....

ಉಳಿಯದು ಎಲ್ಲೂ ಶಾಶ್ವತವಾಗಿ
ನನ್ನ ಹೆಸರು ಎಂದು ತಿಳಿದರೂ
ಮತ್ತೆ ಮತ್ತೆ ಬರೆವುದು
ನಾನೇ ಬರೆದ ನನ್ನ ಹೆಸರನ್ನು
ನೋಡಿ  ನೋಡಿ ಸಂಭ್ರಮಿಸಲು

ಮತ್ತು

ನಿಮಗೆ ನನ್ನ ಇರುವಿಕೆಯನ್ನು
ಮತ್ತೆ ಮತ್ತೆ ನೆನೆಪಿಸಲು !

Wednesday, 25 January 2017

ಅರ್ಥವಾಗದ ಅಳಲು


ಅದೇನೋ ಕನವರಿಕೆ
ಅದೇಕೋ ತಹತಹಿಕೆ
ಒಂದಿನಿತು ಮೌನ
ಮರುಕ್ಷಣ ರಣ !
ಯಾವುದೋ ಹಂಬಲ ?

ರಟ್ಟೆಯೆಲ್ಲ ಸೆಟೆದು
ನರಗಳು ಹಿಗ್ಗಿ ಕುಗ್ಗಿ
ಕಣ್ಣಾಲೆಗಳು ಸೋಗುಟ್ಟಿದರೂ
ಬಾರದ ನಿದ್ದೆ.
ಬಂದರೂ ಎಂಥದ್ದೋ
ಕನಸು
ಅಲ್ಲೂ ಓಟ !

ಸಾವಿರ ಕುದುರೆಗಳು
ಜಿಗಿದು ಧೂಳಿಟ್ಟು
ಓಡುವ ಓಟ
ಸೂರ್ಯನೆಡೆಗೆ !

ಆ ಉರಿಬಿಸಿಲಿಗೆ
ಕಂಗಳ ಜ್ವಾಲೆ
ಮುಂದೆಂದೋ
ಅನಂತದಲಿ ಕರಗುವ
ಹಾಗೆ !

Tuesday, 24 January 2017

ಅಳಿಗುಳಿ ಮನೆ

ನಿನ್ನ ಅoದವೇ ಮೆರುಗು
ಆ ಹೊಳೆವ ಕ೦ಗಳ ನೋಡುವ
ನನಗೋ  ಬೆರಗು.

ತುಟಿ ಜಾರುತಿಹ ಮಾತುಗಳ
ಎದುರು ನೋಡುತಲಿ
ನಿಷ್ಕ್ರಿಯನು ನಾನು
ಗಮನಿಸಲಿಲ್ಲವೇಕೆ ನೀನು ?

ನಿನದೇ ಒನಪಿಗೆ
ಸಾಕ್ಷಿಯಾಯ್ತು ಮುoಗುರುಳು
ಕೈಬೆರಳುಗಳು ಸೋಕಲು
ಒಣಗಿತೆನ್ನ ಕೊರಳು !

ಕೆನ್ನೆಯ ಅoಚಲಿ
ಅಳಿಗುಳಿ ಮನೆ
ಬ೦ಧಿಸುವುದೆ೦ದು ನನ್ನ
ಅದರೊಳಗೆ !

Monday, 23 January 2017

ನನ್ನ ಕಥೆ


ನನ್ನದೊ೦ದು ಕಥೆಯಿದೆ
ಓದುವಿರಾ ?
ಸಣ್ಣದು, ಒ೦ದು ಟೀಗುಟುಕಿನಲ್ಲಿ
ಮುಗಿಸುವ೦ತಹುದು !

ಬೆರಗುಗೊಳಿಸುವುದೋ
ಭ್ರಮನೀರಸಗೊಳಿಸುವುದೋ
ಬೋರುಹೊಡೆಸುವುದೋ ಗೊತ್ತಿಲ್ಲ
ಓದಿ ಹೇಳುವಿರಾ ದಯವಿಟ್ಟು ?

ಬರೆದು ಆಯಿತು ಗಾವುದ
ಬಣ್ಣ ಮಾಸಿದೆ ಕಾಗದ
ಆದರೂ ನನಗದು ಈಗಷ್ಟೇ
ಅರಳಿದ ಹೂವಿನ೦ತೆ !

ನಿಮಗೂ ಹಾಗೇ ಅನಿಸುವುದಾ
ಸಲ್ಪ ಗೊತ್ತಾಗಬೇಕಿತ್ತು ನನಗೆ

ಹಲವು ದಿನಗಳ
ಬ೦ಧನದೆ ಬರೆದು
'ನಾ' ಬಿಡಿಸಿಕೊ೦ಡರೂ...
ಓದಿ ಬಿಡುಗಡೆಗೊಳಿಸುವಿರಾ
ಕಥೆಯನ್ನು ?

Friday, 13 January 2017

ದೇವರುಗಳ ರಾಜ್ಯದಲ್ಲಿ !



ನಿರ್ಗುಣನೋ ನಿರಾಕಾರನೋ
ಕಂಡೋರ್ಯಾರು ನಿನ್ನನ್ನ
ಎಲ್ಲಿರುವೆಯೋ ಎಂತಿರುವೆಯೋ
ಹೇಗೆ ಕರೆಯಲಿ ನಿನ್ನನ್ನ

ಉಳುವವನ ನೊಗ ಸೋತಿರುವಾಗ
ಹೊರುವವನ ಬೆನ್ನು ಬಾಗಿರುವಾಗ

ಎಡವಿದ ಕಾಲೇ ಮತ್ತೆ ತೊಡರಿ
ನೆಡೆಯುವುದನ್ನೇ  ನಿಲಿಸಿರುವಾಗ

ಸುಳ್ಳಿಗೆ ಸತ್ಯದ ಕುಲಾವಿ ಹೊಲಿಸಿ
ಹಾಡಹಗಲಲೆ ಕುಣಿಸಿರುವಾಗ

ನಿನದೆ ಮನೆಯ ಒಳಹೊರಗಲ್ಲಿ
ಎಷ್ಟು ಅಂತರ ಬೇಡುವನಲ್ಲಿ !
ಯಾರಿಗೆ ಕೊಟ್ಟೋ ಯಾರನು ಬಿಟ್ಟೋ

ಹುಂಡಿ ತುಂಬಿದರೂ
ಹೊಟ್ಟೆ ತುಂಬದಿಹ
ದೇವರುಗಳ ರಾಜ್ಯದಲ್ಲಿ !