Thursday, 11 April 2019

ಕ್ಯೂಬನ್ ಕಾಫಿ ಹಾವಾನಾದ  ಸಿಗಾರ್
ಎಲ್ಲೆಲ್ಲೂ ದಂಡಿಬೆಳೆವ ಶುಗರ್
ಹುಚ್ಚು ಪ್ರೀತಿ ಹಾಡು ಕುಣಿತ
ಹೋರಾಟದ ಕಿಚ್ಚೇ ನಾಡಿ ಮಿಡಿತ !
ಚಿಗುರು ಮೀಸೆಯ ಚೆ ಗುವೇರಾ
ಕ್ಯಾಸ್ಟ್ ಐರನ್ ನಂಥಾ ಕ್ರಾಂತಿಕಾರಿ ಫಿಡೆಲ್
ಎದೆಯಲಿ ಕಾವ್ಯ ಕೈಯಲಿ ಕೋವಿ !
ಒಬ್ಬನಿಂದೊಬ್ಬನ ಎದೆಗೆ ಸದಾ
ಹರಿಯುವ ಅಮೃತವಾಹನಿ
ನೋವಿಗೆ ನಿಲ್ಲುವ ನಲಿವಿಗೆ ಬೆರೆಯುವ
ಮತ್ತು ತನ್ನ ತೆಕ್ಕೆಗೆ ಸದಾ
ಬಾ ಬಾ ಎನ್ನುತ್ತಲೇ ಇರುವ ಕ್ಯೂಬಾ !

ಕಾಳುಗಳ ಚೆಲ್ಲಿ ಮರೆಯಲ್ಲಿ ಕಾದೆ
ಹಕ್ಕಿಗಳಿಗಾಗಿ ಗಂಟೆಗಟ್ಟಲೆ

ಮೋಡ ಜರುಗಿತು ಬಾಗಿ
ಗಾಳಿ ಬೀಸುತ್ತಿತ್ತು ಹಾಯಾಗಿ
ಕಮ್ಮಿಯಾಗಿತ್ತು ಬಿಸಿಲ ಝಳ
ಬಂದೇ ಬರಬಹುದು
ಎನಿಸಿತ್ತು ಬಾನಿಂದ
ಗುಬ್ಬಿ ಮೈನಾ ಪಾರಿವಾಳ

ಎಲ್ಲರಂತೆ ನನಗೂ
ಪಕ್ಷಿಯೆಂದರೆ ಪ್ರೀತಿ
ಬಲು ಮಜಾ ಅವು
ಲವಲವಿಕೆಯಿಂದಿರುವ ರೀತಿ !

ಬಲು ನೀಟು ಪೋಷಾಕು
ಎಲ್ಲ ಬಣ್ಣಗಳೂ ನಾಚಬೇಕು
ಎಂಥ ಚೂಟಿ ಚುರುಕು
ಹಲ್ಲೆಷ್ಟು ಗಟ್ಟಿ ಇರಬೇಕು
ಅಂತೆಲ್ಲಾ ಅಂದುಕೊಂಡೆ !

ಹಕ್ಕಿ ಹಾರಿದರೆ
ಚಿಲಿಪಿಲಿ ಗುಟ್ಟಿದರೆ
ಗಂಭೀರವಾಗಿ ನಡೆದರೆ
ರೆಕ್ಕೆಗಳ ಕೈ ಹಿಂದಕ್ಕೆ ಕಟ್ಟಿ
ಏನೋ ಹರಿಯುವುದು ಮನಕೆ
ಚಿಗುರುವುದು ಸಾವಿರ ಬಯಕೆ !

ಅದನು ತಿಳಿದೇ ನಾನಿಂತು
ಕಾಯುತಿರುವೆ ಮರೆಯಲ್ಲಿ
ಓ ಗಂಧರ್ವರೇ ನಿಮ್ಮ ಹಿಂಡು
ಬೇಗ ಬರಲಿ !


ಮುಖದಲ್ಲಿನ
 'ಕಳೆ' ಗೆ
'ಬರ ' ಬಂದಾಗ
ದೇಹವಾಗುವುದು
'ಕಳೆಬರ' 
ತರಾತುರಿಯಲ್ಲಿ ಎಲ್ಲಿಗೋ
ರೆಡಿಯಾಗ ಹೊರಟವಳ ಬಳಿ
ನಾನಿಂದು ಚಂದದೊಂದು
ಕವಿತೆ ಬರೆದೆನೆಂದೆ

ಅದಕವಳು ' ಚಂದವೋ-ಮಂದವೋ '
ನಾನು ಹೇಳಬೇಕು
ನಿನ್ನ ಭುಜ ನೀನೇ ತಟ್ಟಿಕೊಂಡರೆ
ಹೇಗೆ ಕವಿಯೇ ಎನ್ನಬೇಕೇ  !

ಸುಮ್ಮನಾಗದ ನಾನು
ಇವಳೇ ' ಈ ಕವಿತೆ ಬರೆವಾಗ
ಬರೆದು ಮುಗಿದಾಗ ಮತ್ತೆ
ಓದಿದಾಗ ಪ್ರಫುಲ್ಲವಾಗಿತ್ತು  ಮನಸು '
ಅದಕೆ ಹಾಗೆಂದೆನೆಂದೆ !

ಮೂಗು ಮುರಿದವಳು
ಸೀರೆ ನೆರಿಗೆಯೆಲ್ಲವ ಹಿಡಿದು
ಸೆರಗ ಸರಿಮಾಡಿಕೊಂಡು
'ಬಫ' ತಾಗಿಸಿದಳು ಕೆನ್ನೆಗೆ ಮತ್ತೆ ಮತ್ತೆ
ಬೀಗಿದಳು ನಿಂತು ಕನ್ನಡಿಯ ಮುಂದೆ

ಕವಿಹೇಳದ್ದನ್ನು ಕನ್ನಡಿಯೇ ಹೇಳಿರಬೇಕು
'ಛೆ ' ನಾನೆಂದುಕೊಂಡೆ
" ಇಲ್ಲವೇ ಕವಿಗಿಂಥದೊಂದ್ದು ಕನ್ನಡಿ " !