Wednesday, 25 January 2017

ಅರ್ಥವಾಗದ ಅಳಲು


ಅದೇನೋ ಕನವರಿಕೆ
ಅದೇಕೋ ತಹತಹಿಕೆ
ಒಂದಿನಿತು ಮೌನ
ಮರುಕ್ಷಣ ರಣ !
ಯಾವುದೋ ಹಂಬಲ ?

ರಟ್ಟೆಯೆಲ್ಲ ಸೆಟೆದು
ನರಗಳು ಹಿಗ್ಗಿ ಕುಗ್ಗಿ
ಕಣ್ಣಾಲೆಗಳು ಸೋಗುಟ್ಟಿದರೂ
ಬಾರದ ನಿದ್ದೆ.
ಬಂದರೂ ಎಂಥದ್ದೋ
ಕನಸು
ಅಲ್ಲೂ ಓಟ !

ಸಾವಿರ ಕುದುರೆಗಳು
ಜಿಗಿದು ಧೂಳಿಟ್ಟು
ಓಡುವ ಓಟ
ಸೂರ್ಯನೆಡೆಗೆ !

ಆ ಉರಿಬಿಸಿಲಿಗೆ
ಕಂಗಳ ಜ್ವಾಲೆ
ಮುಂದೆಂದೋ
ಅನಂತದಲಿ ಕರಗುವ
ಹಾಗೆ !

Tuesday, 24 January 2017

ಅಳಿಗುಳಿ ಮನೆ

ನಿನ್ನ ಅoದವೇ ಮೆರುಗು
ಆ ಹೊಳೆವ ಕ೦ಗಳ ನೋಡುವ
ನನಗೋ  ಬೆರಗು.

ತುಟಿ ಜಾರುತಿಹ ಮಾತುಗಳ
ಎದುರು ನೋಡುತಲಿ
ನಿಷ್ಕ್ರಿಯನು ನಾನು
ಗಮನಿಸಲಿಲ್ಲವೇಕೆ ನೀನು ?

ನಿನದೇ ಒನಪಿಗೆ
ಸಾಕ್ಷಿಯಾಯ್ತು ಮುoಗುರುಳು
ಕೈಬೆರಳುಗಳು ಸೋಕಲು
ಒಣಗಿತೆನ್ನ ಕೊರಳು !

ಕೆನ್ನೆಯ ಅoಚಲಿ
ಅಳಿಗುಳಿ ಮನೆ
ಬ೦ಧಿಸುವುದೆ೦ದು ನನ್ನ
ಅದರೊಳಗೆ !

Monday, 23 January 2017

ನನ್ನ ಕಥೆ


ನನ್ನದೊ೦ದು ಕಥೆಯಿದೆ
ಓದುವಿರಾ ?
ಸಣ್ಣದು, ಒ೦ದು ಟೀಗುಟುಕಿನಲ್ಲಿ
ಮುಗಿಸುವ೦ತಹುದು !

ಬೆರಗುಗೊಳಿಸುವುದೋ
ಭ್ರಮನೀರಸಗೊಳಿಸುವುದೋ
ಬೋರುಹೊಡೆಸುವುದೋ ಗೊತ್ತಿಲ್ಲ
ಓದಿ ಹೇಳುವಿರಾ ದಯವಿಟ್ಟು ?

ಬರೆದು ಆಯಿತು ಗಾವುದ
ಬಣ್ಣ ಮಾಸಿದೆ ಕಾಗದ
ಆದರೂ ನನಗದು ಈಗಷ್ಟೇ
ಅರಳಿದ ಹೂವಿನ೦ತೆ !

ನಿಮಗೂ ಹಾಗೇ ಅನಿಸುವುದಾ
ಸಲ್ಪ ಗೊತ್ತಾಗಬೇಕಿತ್ತು ನನಗೆ

ಹಲವು ದಿನಗಳ
ಬ೦ಧನದೆ ಬರೆದು
'ನಾ' ಬಿಡಿಸಿಕೊ೦ಡರೂ...
ಓದಿ ಬಿಡುಗಡೆಗೊಳಿಸುವಿರಾ
ಕಥೆಯನ್ನು ?

Friday, 13 January 2017

ದೇವರುಗಳ ರಾಜ್ಯದಲ್ಲಿ !



ನಿರ್ಗುಣನೋ ನಿರಾಕಾರನೋ
ಕಂಡೋರ್ಯಾರು ನಿನ್ನನ್ನ
ಎಲ್ಲಿರುವೆಯೋ ಎಂತಿರುವೆಯೋ
ಹೇಗೆ ಕರೆಯಲಿ ನಿನ್ನನ್ನ

ಉಳುವವನ ನೊಗ ಸೋತಿರುವಾಗ
ಹೊರುವವನ ಬೆನ್ನು ಬಾಗಿರುವಾಗ

ಎಡವಿದ ಕಾಲೇ ಮತ್ತೆ ತೊಡರಿ
ನೆಡೆಯುವುದನ್ನೇ  ನಿಲಿಸಿರುವಾಗ

ಸುಳ್ಳಿಗೆ ಸತ್ಯದ ಕುಲಾವಿ ಹೊಲಿಸಿ
ಹಾಡಹಗಲಲೆ ಕುಣಿಸಿರುವಾಗ

ನಿನದೆ ಮನೆಯ ಒಳಹೊರಗಲ್ಲಿ
ಎಷ್ಟು ಅಂತರ ಬೇಡುವನಲ್ಲಿ !
ಯಾರಿಗೆ ಕೊಟ್ಟೋ ಯಾರನು ಬಿಟ್ಟೋ

ಹುಂಡಿ ತುಂಬಿದರೂ
ಹೊಟ್ಟೆ ತುಂಬದಿಹ
ದೇವರುಗಳ ರಾಜ್ಯದಲ್ಲಿ !