Friday, 12 May 2017

ಹಣ್ಣಾದ ಮುದುಕ


ಬರಡಾಗಿದ್ದ  ಭೂಮೀಲಿ
ಸಸಿಗಳ ನೆಟ್ಟ
ನೀರ ತಂದು ಹಾಯಿಸಿ
ಮರಗಳ ಕನಸ ಕಂಡ !

ನಕ್ಕರು ಹಲವರು
ತಿಕ್ಕಲೆಂದರು ಕೆಲವರು
ಇಲ್ಲದ ನೀರ
ತಂದು ಹಾಯಿಸಿ
ಮನೆಹಾಳು
ಮಾಡುತ್ತಿರುವನೆಂದರು
ಬಹಳರು !
ಆದರೂ ಅವನು
ಮರಗಳ ಕನಸ ಬಿಡಲಿಲ್ಲ .

ವರ್ಷಗಳು ಉರುಳಲು
ಮರಗಳು ಕಾಡಾದವು
ಬರಡು ಭೂಮಿಯಲ್ಲಿ
ನೀರು ನಿಂತಿತು
ಹಕ್ಕಿಗಳು ಬಂದವು
ಭಾವಿ ತುಂಬಿದವು
ಗಾಳಿ ತಂಪಾಯ್ತು....

ಈಗ ಜನ ಹಾಯಾಗಿದ್ದಾರೆ
ಎಲ್ಲವನು ಊರ ದೇವರಿಗೆ
ಆರೋಪಿಸಿ , ದೇವಳದ ಮೇಲೆ
ಗೋಪುರವ ಕಟ್ಟಿಸಿ !

ಸಸಿ ನೆಟ್ಟವನು ಈಗ
ಮುದುಕನಾಗಿದ್ದಾನೆ
ಬೆಟ್ಟದ ತಡಿಯ
ಗುಡಿಸಲಲ್ಲಿ ಸದಾ
ಮಲಗಿರುತ್ತಾನೆ !
ನಿದ್ದೆಯಲ್ಲೂ ಮರಳುಗಾಡ
ಕನವರಿಸುತ್ತಿರುತ್ತಾನೆ !

No comments:

Post a Comment