Sunday, 15 April 2018

ಮಿಡಿತವು ನಿಲ್ಲುವುದೇ

ಅಮ್ಮ ಎಂದೊಡನೆ ಇದೋ 
ನನ್ನ ಹೃದಯ ಕಂಪಿಸುತಲಿದೆ 
ನಿನಗೂ ಹಾಗೇ ಅನಿಸುವುದಾ ? 
ಇದೆಂಥಾ ಪ್ರಶ್ನೆ ನಿನದು
ಎನ್ನದಿರು “ ನನ್ನಮ್ಮಾ” 
ಕುತೂಹಲವಷ್ಟೆ ನನಗೆ 

ಹೊಕ್ಕುಳಬಳ್ಳಿಯ ಕತ್ತರಿಸಿದರೂ
ಮಿಡಿತವು ನಿಲ್ಲುವುದೇ 
ಕರುವು ಅಂಬಾ ಎಂದೊಡನೆ
ಹಸುವಿನ ಮೊಲೆಯು ಜಿನುಗುವುದಂತೆ 
ನಾ ಅತ್ತಾಗಲೆಲ್ಲಾ ನಿನ್ನ ಎದೆಹಾಲಿನ 
ಭರ್ತಿ ಊಟ ನನಗೆ

ಚಳಿಯಾದಾಗಲೆಲ್ಲ ನಿನ್ನ ತಬ್ಬಿ ಮಲಗಿದೆ 
ಹುದುಗಿಸಿ ನನ್ನ ಮೊಗವ ನಿನ್ನೆದೆಯಲಿ
ಎಷ್ಟು ಬೆಚ್ಚಗಿತ್ತು ಆ ಅಪ್ಪುಗೆ 
ಅಪ್ಪ ಏನೆಂದುಕೊಂಡನೋ !

ಅತ್ತಾಗೆಲ್ಲ ಮುದ್ದಿಸಿದೆ ಕೋಪಿಸಿಕೊಳ್ಳದೆ 
ನಕ್ಕಾಗೆಲ್ಲ ಮತ್ತಷ್ಟು ರಮಿಸಿದೆ ಮಿತಿಯಿಲ್ಲದೆ 
ಎಲ್ಲವನ್ನೂ ಸಲಹಿದೆ ಸ್ಥಿತ ಪ್ರಜ್ಞಳಾಗಿ
ಆಗೀಗ ಕಂಡಿತು ಕಣ್ಣಂಚಲ್ಲಿ ಹನಿ 

ಎಲ್ಲವನ್ನೂ ಅಂತರಂಗದಲ್ಲೇ ಇಟ್ಟುಕೊಂಡು ಬಿಡುವವಳು ನೀನು 
ಅದಕೆ ಮೂರ್ಖನಂತೆ ಕೇಳತೊಡಗಿದ್ದೇನೆ
ಏನೇನೇನೋ ನಾನು 
ಕ್ಷಮಿಸು ನೀನು

No comments:

Post a Comment