Sunday, 19 August 2018

ಅರೆಬರೆ ಹಾಡುಗಳು

ಅರೆಬರೆ ಹಾಡುಗಳು
ನನ್ನೊಳಗೆ ಹುಟ್ಟಿಬೆಳೆದು
ಇನ್ನೇನು ಜಗತ್ತಿಗೆ
ಕಾಣಿಸುವುದರೊಳಗೆ
ಕಳಚಿದವು
ನಿಲ್ಲದ ಬ್ರೂಣದಂತೆ.

ನಾ ಹಾಡಬಲ್ಲೆನೋ
ಹಾಡ ಕಟ್ಟಬಲ್ಲೆನೋ
ನನಗೇ ತಿಳಿಯದೇ
ಬರೀ ಕನಸಿನ ಹಂಗಲ್ಲೇ
ಪ್ರಸವದ ನೋವು.

ಆಗಾಗ ಅರೆನಿದ್ದೆಯ
ಮಂಪರಿನೊಳಗೆ
ಆಳದಿ ಗೆಜ್ಜೆ ಕಟ್ಟಿದ ಸದ್ದು
ಕುಣಿದದ್ದು ಅಸ್ಪಷ್ಟ
ಆದರೂ
ಎದ್ದ ಮರುದಿನವೆಲ್ಲ
ತಲೆ ಗಿರಗಟ್ಟಲೆ !

ಹಾಡು ಹುಟ್ಟದಿದ್ದರೇನಂತೆ
ರಾಗತಾಳಕ್ಕೆ ಮಿಡಿಯದೇ ಹೃದಯ
ಅಂದುಕೊಂಡಾಗಲೆಲ್ಲ ದುಃಖ
ಉಮ್ಮಳಿಸಿ ಬಂದು
ಕಲಕುವುದು ಮನವ
ಬಗ್ಗಡವಾಗಿಸಿ ಬದುಕ !


No comments:

Post a Comment